ಕ್ರೀಡೆ
ಮಾರ್ಕ್ ವುಡ್‌ಗೆ ಐದು ವಿಕೆಟ್ ಗೊಂಚಲು, ಮೇಯರ್ಸ್ ಅರ್ಧಶತಕ
ಐಪಿಎಲ್: ಲಕ್ನೊ ಸೂಪರ್ ಜೈಂಟ್ಸ್‌ಗೆ ಭರ್ಜರಿ ಜಯ

David Warner , Photo: SPORTZPICS for IPL
ಲಕ್ನೊ, ಎ.1: ವೇಗಿ ಮಾರ್ಕ್ ವುಡ್(5-14) ನೇತೃತ್ವದ ಬೌಲರ್‌ಗಳ ಶಿಸ್ತುಬದ್ಧ ದಾಳಿಯ ಸಹಾಯದಿಂದ ಲಕ್ನೊ ಸೂಪರ್ ಜೈಂಟ್ಸ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಶನಿವಾರ ನಡೆದ ಐಪಿಎಲ್‌ನ 3ನೇ ಪಂದ್ಯದಲ್ಲಿ 50 ರನ್‌ಗಳ ಅಂತರದಿಂದ ಭರ್ಜರಿ ಜಯಭೇರಿ ಬಾರಿಸಿ ಗೆಲುವಿನ ಆರಂಭ ಪಡೆದಿದೆ.
ಗೆಲ್ಲಲು 194 ರನ್ ಕಠಿಣ ಗುರಿ ಪಡೆದಿದ್ದ ಡೆಲ್ಲಿ 20 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 143 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಡೆಲ್ಲಿ ಪರ ನಾಯಕ ಡೇವಿಡ್ ವಾರ್ನರ್(56 ರನ್, 48 ಎಸೆತ), ರಿಲೀ ರೊಸ್ಸೌ(30 ರನ್,20 ಎಸೆತ)ಹಾಗೂ ಅಕ್ಷರ್ ಪಟೇಲ್(16 ರನ್)ಎರಡಂಕೆಯ ಸ್ಕೋರ್ ಗಳಿಸಿದರು.
ಬೌಲರ್‌ಗಳಾದ ಮಾರ್ಕ್ ವುಡ್(5-14), ರವಿ ಬಿಷ್ಣೋಯಿ(2-31) ಹಾಗೂ ಅವೇಶ್ ಖಾನ್(2-28)ಡೆಲ್ಲಿಗೆ ಮೂಗುದಾರ ತೊಡಿಸಿದರು. ಮಾರ್ಕ್‌ವುಡ್ ಪ್ರಸಕ್ತ ಟೂರ್ನಿಯಲ್ಲಿ 5 ವಿಕೆಟ್ ಗೊಂಚಲು ಪಡೆದ ಮೊದಲ ಬೌಲರ್ ಎನಿಸಿಕೊಂಡರು.
ಲಕ್ನೊ ಸೂಪರ್ ಜೈಂಟ್ಸ್ 193/6: ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಲಕ್ನೊ ತಂಡ ಆರಂಭಿಕ ಬ್ಯಾಟರ್ ಕೈಲ್ ಮೇಯರ್ಸ್ ಅಬ್ಬರದ ಬ್ಯಾಟಿಂಗ್(73 ರನ್, 38 ಎಸೆತ, 2 ಬೌಂಡರಿ, 7 ಸಿಕ್ಸರ್)ಸಹಾಯದಿಂದ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 193 ರನ್ ಗಳಿಸಿತು.
ಲಕ್ನೊ ತಂಡ ನಾಯಕ ಕೆ.ಎಲ್.ರಾಹುಲ್(8 ರನ್)ವಿಕೆಟನ್ನು ಬೇಗನೆ ಕಳೆದುಕೊಂಡಿತು. ಆಗ ಜೊತೆಗೂಡಿದ ಮೇಯರ್ಸ್ ಹಾಗೂ ದೀಪಕ್ ಹೂಡಾ(17 ರನ್,18 ಎಸೆತ) 2ನೇ ವಿಕೆಟ್‌ಗೆ 79 ರನ್ ಜೊತೆಯಾಟ ನಡೆಸಿ ತಂಡವನ್ನು ಆಧರಿಸಿದರು.
ಕೃನಾಲ್ ಪಾಂಡ್ಯ (ಔಟಾಗದೆ 15, 13 ಎಸೆತ)ಹಾಗೂ ನಿಕೊಲಸ್ ಪೂರನ್(36 ರನ್, 21 ಎಸೆತ) 5ನೇ ವಿಕೆಟ್‌ಗೆ 48 ರನ್ ಜೊತೆಯಾಟ ನಡೆಸಿ ತಂಡವನ್ನು ಉತ್ತಮ ಮೊತ್ತದತ್ತ ಮುನ್ನಡೆಸಿದರು. ಪೂರನ್ ಔಟಾದ ನಂತರ ಪಾಂಡ್ಯ ಅವರು ಆಯುಷ್ ಬದೋನಿ(18 ರನ್, 7 ಎಸೆತ) ಜೊತೆ 6ನೇ ವಿಕೆಟಿಗೆ 22 ರನ್ ಜೊತೆಯಾಟ ನಡೆಸಿ ತಂಡದ ಮೊತ್ತವನ್ನು 193ಕ್ಕೆ ತಲುಪಿಸಿದರು.
ಡೆಲ್ಲಿ ಬೌಲಿಂಗ್ ವಿಭಾಗದಲ್ಲಿ ಖಲೀಲ್ ಅಹ್ಮದ್(2-30) ಹಾಗೂ ಚೇತನ್ ಸಕಾರಿಯ(2-53) ತಲಾ ಎರಡು ವಿಕೆಟ್ ಪಡೆದರು.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ