ಕರ್ನಾಟಕ
ಶಿವಮೊಗ್ಗ: ದಾಖಲೆ ಇಲ್ಲದ 4.5 ಕೋಟಿ ಮೌಲ್ಯದ ಸೀರೆ, 1.5 ಕೋಟಿ ನಗದು ಜಪ್ತಿ

ಶಿವಮೊಗ್ಗ, ಎ.1: ಜಿಲ್ಲಾ ವ್ಯಾಪ್ತಿಯಲ್ಲಿ ಶನಿವಾರ ಚುನಾವಣಾ ಆಯೋಗದ ಅಧಿಕಾರಿಗಳು ದಾಖಲೆ ಇಲ್ಲದ ಕೋಟ್ಯಂತರ ರೂ. ಹಾಗೂ ವಿವಿಧ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೂಕ್ತ ದಾಖಲೆಗಳಿಲ್ಲದೆ ಅನಧಿಕೃತವಾಗಿ ಸಂಗ್ರಹಿಸಿ ಇಟ್ಟಿದ್ದ ಅಂದಾಜು 4.50 ಕೋಟಿ ರೂ. ಮೌಲ್ಯದ ಸೀರೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ಶಿವಮೊಗ್ಗದ ಕೆ.ಆರ್.ಪುರಂ ರಸ್ತೆಯಲ್ಲಿರುವ ಗೋಡೌನ್‌ನಲ್ಲಿ ಇಷ್ಟೊಂದು ಪ್ರಮಾಣದ ಸೀರೆಗಳನ್ನು ಸಂಗ್ರಹಿಸಿ ಇಡಲಾಗಿತ್ತೆನ್ನಲಾಗಿದ್ದು, ಪೊಲೀಸರು ತಮಗೆ ಬಂದ ಮಾಹಿತಿ ಅನ್ವಯ ದಾಳಿ ನಡೆಸಿ 4.50 ಕೋಟಿ ರೂ. ಮೌಲ್ಯದ ಸೀರೆಗಳನ್ನು ಜಪ್ತಿ ಮಾಡಿದ್ದಾರೆ. ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೂಕ್ತ ದಾಖಲೆಗಳಿಲ್ಲದೆ ಬುಲೆರೋ ವಾಹನದಲ್ಲಿ ಸಾಗಿಸುತ್ತಿದ್ದ 1.40 ಕೋಟಿ ರೂ.ಯನ್ನು ವಶಪಡಿಸಿಕೊಳ್ಳಲಾಗಿದೆ.
ಎಟಿ ಎಂಗೆ ಹಣ ಸಾಗಿಸುವ ವಾಹನದಲ್ಲಿ ಸಾಗಿಸಲಾಗುತ್ತಿದ್ದ ಹಣದ ಬಗ್ಗೆ ಅನುಮಾನಗೊಂಡ ಪೊಲೀಸರು ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ದಾಖಲೆ ಸಮರ್ಪಕವಾಗಿರದ ಕಾರಣ ವಾಹನವನ್ನು ಹಾಗೂ ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆಂದು ತಿಳಿದು ಬಂದಿದೆ. ಅಲ್ಲದೆ ದಾಖಲೆಗಳಿಲ್ಲದೆ ವಾಹನದಲ್ಲಿ ಸಾಗಿಸುತ್ತಿದ್ದ 20 ಲಕ್ಷ ರೂ. ನಗದನ್ನು ಸಾಗರ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ನಗದು ವಶಕ್ಕೆ ಪಡೆಯಲಾಗಿದೆ.
ಸಾಗರದ ಚೂರಿಕಟ್ಟೆಯ ಚೆಕ್ ಪೋಸ್ಟ್‌ನಲ್ಲಿ ಟಾಟಾ ಇಂಡಿಗೋ ವಾಹನದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದ ಹಣವನ್ನು ಸಾಗಿಸಲಾಗುತ್ತಿದ್ದು, ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಇಟ್ಟಿರಲಿಲ್ಲ. ಈ ಹಿನ್ನೆಲೆಯಲ್ಲಿ ಹಣವನ್ನು ಜಪ್ತಿ ಮಾಡಿದ್ದಾರೆ. ವಿನೋಬನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೂಕ್ತ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 100 ಚೀಲ ಅಕ್ಕಿ ವಶಪಡಿಸಿಕೊಳ್ಳಲಾಗಿದೆ. 1.56 ಲಕ್ಷ ರೂ. ಮೌಲ್ಯದ 26 ಕ್ವಿಂಟಾಲ್ ಅಕ್ಕಿಯನ್ನು ಲಾರಿಯಲ್ಲಿ ಸಾಗಿಸುತ್ತಿದ್ದಾಗ ವಶಪಡಿಸಿಕೊಳ್ಳಲಾಗಿದೆ.
ದೇವಬಾಳ-ಯಡವಾಲದ ಕೆರೆ ಏರಿ ರಸ್ತೆಯಲ್ಲಿ ವ್ಯಾಗನಾರ್ ಕಾರ್‌ನಲ್ಲಿ ವಿವಿಧ ಬ್ರಾಂಡ್‌ನ 20.790 ಲೀಟರ್ ಮದ್ಯ ಮತ್ತು 56.270 ಲೀಟರ್ ಬಿಯರ್ ಹೊತ್ತೊಯ್ಯುತ್ತಿದ್ದ ವೇಳೆ ಅಬಕಾರಿ ಇಲಾಖೆಯವರು ದಾಳಿ ನಡೆಸಿದ್ದಾರೆ. ಅಂದಾಜು 3,21,939 ರೂ. ಮೌಲ್ಯದ ಲಿಕ್ಕರ್ ನ್ನು ಜಪ್ತಿ ಮಾಡಿದ್ದು, ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ