varthabharthi


ವಿಶೇಷ-ವರದಿಗಳು

ಬಿಜೆಪಿ ವಿರುದ್ಧ ಪ್ರತಿಪಕ್ಷಗಳ ಒಗ್ಗೂಡುವಿಕೆ: ನಿತೀಶ್ ಕುಮಾರ್ ಮುಂಚೂಣಿಯಲ್ಲಿರುವುದೇಕೆ?

ವಾರ್ತಾ ಭಾರತಿ : 25 May, 2023
ನಚಿಕೇತ್ ದುಷ್ಕರ್

ಪ್ರತಿಪಕ್ಷಗಳನ್ನು ಒಗ್ಗೂಡಿಸುವ ಯತ್ನದಿಂದಾಗಿ, ಕೇಂದ್ರದಲ್ಲಿ ನಿತೀಶ್ ಕುಮಾರ್ ಮಹತ್ವದ ಪಾತ್ರ ವಹಿಸಲಿರುವಂತೆ ಕಾಣಿಸುತ್ತದೆ ಎಂಬುದು ವಿಶ್ಲೇಷಕರ ಲೆಕ್ಕಾಚಾರ. ಅವರು ನಡೆಸಿರುವ ಸಭೆಗಳು ಮಹತ್ವಾಕಾಂಕ್ಷಿ ವಿರೋಧ ಪಕ್ಷದ ನಾಯಕರಲ್ಲಿಯೇ ನಿತೀಶ್ ಮುಂಚೂಣಿಯಲ್ಲಿರುವಂತೆ ಮಾಡಿವೆ. ನಿತೀಶ್ ಕುಮಾರ್ ಅವರ ಈ ಮುನ್ನಡೆಗೆ ಮುಖ್ಯ ಕಾರಣ, ಇತರ ವಿರೋಧ ಪಕ್ಷಗಳ ನಾಯಕರು ತಮ್ಮ ರಾಜ್ಯಗಳಿಗೇ ಸೀಮಿತರಾಗಿರುವುದು ಒಂದಾದರೆ, ನಿತೀಶ್ ಅವರಿಗಿರುವಂತಹ ಬಲವಾದ ಚರಿಷ್ಮಾ ಇತರರಿಗೆ ಇಲ್ಲ ಎಂಬುದು ಇನ್ನೊಂದು.

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಕಳೆದ ಒಂದು ತಿಂಗಳಿನಿಂದ ದೇಶಾದ್ಯಂತ ಸಂಚರಿಸುತ್ತಿದ್ದಾರೆ. ದಿಲ್ಲಿಯಿಂದ ಪಶ್ಚಿಮ ಬಂಗಾಳದವರೆಗೆ, ಉತ್ತರ ಪ್ರದೇಶದಿಂದ ಮಹಾರಾಷ್ಟ್ರದವರೆಗೆ ಈ ಅವಧಿಯಲ್ಲಿ ಅವರು ಓಡಾಡಿದ್ದಾರೆ. ಈ ಪ್ರವಾಸದ ಹಿಂದಿನ ಉದ್ದೇಶ, ಮುಂದಿನ ವರ್ಷದ ಲೋಕಸಭಾ ಚುನಾವಣೆಗಾಗಿ ಆಡಳಿತಾರೂಢ ಬಿಜೆಪಿ ವಿರುದ್ಧ ಒಂದಾಗಲು ಪ್ರಮುಖ ವಿರೋಧ ಪಕ್ಷಗಳ ನಾಯಕರ ಮನವೊಲಿಕೆ.

ಪ್ರತಿಪಕ್ಷಗಳ ಒಗ್ಗಟ್ಟಿನ ಹಿಂದಿರುವ ಕಾರ್ಯತಂತ್ರವೆಂದರೆ, ಬಿಜೆಪಿ ನೇತೃತ್ವದ ಎನ್‌ಡಿಎ ವಿರುದ್ಧ ಜಂಟಿ ವಿರೋಧ ಪಕ್ಷದ ಅಭ್ಯರ್ಥಿಗಳನ್ನು ಸಾಧ್ಯವಾದಷ್ಟೂ ಲೋಕಸಭಾ ಕ್ಷೇತ್ರಗಳಲ್ಲಿ ಕಣಕ್ಕಿಳಿಸುವುದು. ಈ ಮೂಲಕ ಆ ಕ್ಷೇತ್ರಗಳಲ್ಲಿನ ಬಿಜೆಪಿ ವಿರೋಧಿ ಮತಗಳನ್ನು ಕ್ರೋಡೀಕರಿಸಲು ಒಮ್ಮತದಿಂದ ಪ್ರಯತ್ನಿಸುವುದು. ಈ ನಿಟ್ಟಿನಲ್ಲಿ ನಿತೀಶ್ ಕುಮಾರ್ ಬಹುತೇಕ ವಿರೋಧ ಪಕ್ಷಗಳ ನಾಯಕರೊಡನೆ ಇತ್ತೀಚೆಗೆ ನಡೆಸಿರುವ ಮಾತುಕತೆಗಳು ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದಂತಿವೆ.

ಪ್ರತಿಪಕ್ಷಗಳನ್ನು ಒಗ್ಗೂಡಿಸುವ ಇಂಥದೊಂದು ಯತ್ನದಿಂದಾಗಿ, ಕೇಂದ್ರದಲ್ಲಿ ನಿತೀಶ್ ಕುಮಾರ್ ಮಹತ್ವದ ಪಾತ್ರ ವಹಿಸಲಿರುವಂತೆ ಕಾಣಿಸುತ್ತದೆ ಎಂಬುದು ವಿಶ್ಲೇಷಕರ ಲೆಕ್ಕಾಚಾರ. ಅವರು ನಡೆಸಿರುವ ಸಭೆಗಳು ಮಹತ್ವಾಕಾಂಕ್ಷಿ ವಿರೋಧ ಪಕ್ಷದ ನಾಯಕರಲ್ಲಿಯೇ ನಿತೀಶ್ ಮುಂಚೂಣಿ ಯಲ್ಲಿರುವಂತೆ ಮಾಡಿವೆ. ನಿತೀಶ್ ಕುಮಾರ್ ಅವರ ಈ ಮುನ್ನಡೆಗೆ ಮುಖ್ಯ ಕಾರಣ, ಇತರ ವಿರೋಧ ಪಕ್ಷಗಳ ನಾಯಕರು ತಮ್ಮ ರಾಜ್ಯಗಳಿಗೇ ಸೀಮಿತರಾಗಿರುವುದು ಒಂದಾದರೆ, ನಿತೀಶ್ ಅವರಿಗಿರುವಂತಹ ಬಲವಾದ ಚರಿಷ್ಮಾ ಇತರರಿಗೆ ಇಲ್ಲ ಎಂಬುದು ಇನ್ನೊಂದು.

ಇಷ್ಟಾಗಿಯೂ, ನಿತೀಶ್ ಅಂಥದೊಂದು ಒಗ್ಗಟ್ಟು ಸಾಧಿಸಿಯಾರು ಎಂಬುದರ ಬಗ್ಗೆ ಮಾತ್ರವಲ್ಲದೆ, ಅವರು ಪ್ರತಿಪಕ್ಷಗಳನ್ನು ಒಗ್ಗೂಡಿಸುವಲ್ಲಿ ಅನುಸರಿಸಬಹುದಾದ ವ್ಯಾಪಕ ಕಾರ್ಯತಂತ್ರದ ಬಗ್ಗೆಯೂ ಸಂಶಯ ವ್ಯಕ್ತವಾಗದೆ ಇಲ್ಲ.

ಪ್ರತಿಪಕ್ಷಗಳನ್ನು ಒಂದುಗೂಡಿಸುವ ಯತ್ನದ ಭಾಗವಾಗಿ ನಿತೀಶ್ ಕುಮಾರ್ ಮತ್ತು ಅವರ ಮಿತ್ರ, ರಾಷ್ಟ್ರೀಯ ಜನತಾ ದಳದ ನಾಯಕ ತೇಜಸ್ವಿ ಯಾದವ್ ಮೊದಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರನ್ನು ಎಪ್ರಿಲ್‌ನಲ್ಲಿ ಭೇಟಿಯಾಗುತ್ತಾರೆ. ಈ ಮಾತುಕತೆಯನ್ನು ಐತಿಹಾಸಿಕ ಹೆಜ್ಜೆ ಎಂದೇ ರಾಹುಲ್ ಹೇಳಿದ್ದುಂಟು.

ಇದಾದ ಬಳಿಕ ಅವರು ಇತರ ವಿರೋಧ ಪಕ್ಷದ ನಾಯಕರೊಂದಿಗೆ ಸಭೆ ಶುರು ಮಾಡಿದರು. ಎಪ್ರಿಲ್‌ನಲ್ಲಿಯೇ ಅವರು ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ ಕೇಜ್ರಿವಾಲ್, ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಮತ್ತು ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿಯಾದರು. ಮೇ ತಿಂಗಳಲ್ಲಿ ಜಾರ್ಖಂಡ್ ಮುಕ್ತಿ ಮೋರ್ಚಾದ ಹೇಮಂತ್ ಸೊರೇನ್, ರಾಷ್ಟ್ರೀಯ ಕಾಂಗ್ರೆಸ್ ಪಾರ್ಟಿಯ ಶರದ್ ಪವಾರ್ ಮತ್ತು ಶಿವಸೇನೆಯ ಉದ್ಧವ್ ಠಾಕ್ರೆ ಅವರೊಡನೆ ಮಾತುಕತೆ ನಡೆಸಿದರು.

ನಿತೀಶ್ ಇಷ್ಟಕ್ಕೇ ನಿಲ್ಲದೆ, ಬಿಜೆಪಿಗೆ ಮತ್ತೆ ಮತ್ತೆ ವಿಷಯಾಧಾರಿತ ಬೆಂಬಲ ನೀಡುವ ಬಿಜು ಜನತಾ ದಳದ ನವೀನ್ ಪಟ್ನಾಯಕ್ ಅವರನ್ನೂ ಕಂಡರು. ಆದರೆ, ಪಟ್ನಾಯಕ್ ತಮ್ಮ ಪಕ್ಷ ಏಕಾಂಗಿಯಾಗಿಯೇ ಚುನಾವಣೆ ಎದುರಿಸಲಿದೆ ಎಂದು ಆನಂತರ ಘೋಷಿಸಿದರು.

ನಿತೀಶ್ ಅವರ ಈ ಹೆಜ್ಜೆಯನ್ನು ಪ್ರತಿಪಕ್ಷಗಳ ನಾಯಕರು ಮೆಚ್ಚುಗೆಯಿಂದಲೇ ಸ್ವಾಗತಿಸಿದ್ದಾರೆ. ಅವರಲ್ಲಿ ಹೆಚ್ಚಿನವರು ತಮ್ಮದೇ ಆದ ಮಹತ್ವಾಕಾಂಕ್ಷೆಗಳನ್ನು ಹೊಂದಿರುವವರು ಎಂಬುದೂ ತೀರಾ ಗೊತ್ತಿರದ ವಿಚಾರವೇನಲ್ಲ. ಚರ್ಚೆಗಳಲ್ಲಿ ನಿತೀಶ್ ಪಾತ್ರದ ಪ್ರಾಮುಖ್ಯತೆಯನ್ನು ಅವರೆಲ್ಲ ಒತ್ತಿ ಹೇಳುತ್ತಿದ್ದಾರೆ. ಎಲ್ಲಾ ಪ್ರತಿಪಕ್ಷಗಳನ್ನು ಒಂದೇ ಸೂರಿನಡಿ ತರಲು ನಿತೀಶ್ ಅವರ ಯತ್ನ ಮಹತ್ವದ್ದಾಗಿದೆ ಎಂದು ಕೇಜ್ರಿವಾಲ್ ಹೇಳಿದರೆ, 1970ರ ದಶಕದಲ್ಲಿ ಬಿಹಾರದಿಂದ ಶುರುವಾದ ಸಮಾಜವಾದಿ ನಾಯಕ ಜಯಪ್ರಕಾಶ್ ನಾರಾಯಣ್ ನೇತೃತ್ವದ ಜೆಪಿ ಚಳವಳಿಯಂತೆ ಮತ್ತೊಂದು ವಿದ್ಯಮಾನ ಆ ರಾಜ್ಯದಲ್ಲಿ ಆಗಬೇಕಿದೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಪ್ರತಿಪಕ್ಷಗಳನ್ನು ಒಗ್ಗೂಡಿಸುವ ನಿಟ್ಟಿನ ಮಾತುಕತೆ ಗಳಲ್ಲಿ ನಿತೀಶ್ ಪ್ರಾಮುಖ್ಯತೆಯನ್ನು ಬಿಜೆಪಿ ಗಮನಿಸದೆ ಇಲ್ಲ. ಈಗಿನ ಮತ್ತು ಹಿಂದಿನ ಮುಖ್ಯಮಂತ್ರಿಗಳೂ ಸೇರಿದಂತೆ ವಿವಿಧ ನಾಯಕರನ್ನು ಭೇಟಿಯಾಗುವ ಮೂಲಕ ನಿತೀಶ್ ಕೈಗೂಡದ ಕೆಲಸವೊಂದಕ್ಕಾಗಿ ಮಧ್ಯವರ್ತಿಯಂತೆ ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿ ಬಿಹಾರ ಘಟಕದ ಮುಖ್ಯಸ್ಥ ಸಾಮ್ರಾಟ್ ಚೌಧರಿ ಹೇಳಿದ್ದಾರೆ.

ಆದರೆ ನಿತೀಶ್ ಮಾತ್ರ, ತಮಗೆ ಅಧಿಕಾರ ಮತ್ತು ಹುದ್ದೆಯ ಆಸೆಯೇನಿಲ್ಲ. ದೇಶದ ಒಳಿತಿಗಾಗಿ ಒಂದು ಪ್ರಯತ್ನ ಇದು ಅಷ್ಟೆ ಎಂದಿದ್ದಾರೆ. ‘‘ನಾನು ಪ್ರಧಾನಿಯಾಗಲು ಉದ್ದೇಶಿಸಿಲ್ಲ ಎಂದು ಸ್ಪಷ್ಟಪಡಿಸುತ್ತಿದ್ದೇನೆ. ನಾವೆಲ್ಲರೂ ಒಗ್ಗೂಡಿದಾಗ ನಮ್ಮ ನಾಯಕ ಯಾರೆಂದು ನಾವು ನಿರ್ಧರಿಸುತ್ತೇವೆ’’ ಎಂದಿದ್ದಾರೆ ಅವರು.

ಅದೇನೇ ಇದ್ದರೂ, ಪ್ರತಿಪಕ್ಷಗಳ ಒಗ್ಗೂಡಿಸುವಿಕೆಯಲ್ಲಿ ನಿತೀಶ್ ಕುಮಾರ್ ಪ್ರಮುಖ ವ್ಯಕ್ತಿಯಾಗಿ ಹೊರಹೊಮ್ಮು ತ್ತಿದ್ದಾರೆ ಎಂದೇ ರಾಜಕೀಯ ವಿಶ್ಲೇಷಕರು ವಾದಿಸುತ್ತಾರೆ. ಲೇಖಕ ಮತ್ತು ರಾಜಕೀಯ ನಿರೂಪಕ ನಳಿನ್ ವರ್ಮಾ ಹೇಳುವ ಪ್ರಕಾರ, ನಿತೀಶ್ ಅವರು ತಾವು ಪ್ರಧಾನಿ ಹುದ್ದೆಯ ಬಗ್ಗೆ ಆಸಕ್ತರಲ್ಲ ಎಂದು ಹೇಳುತ್ತಿದ್ದರೆ, ಪ್ರತಿಪಕ್ಷಗಳನ್ನು ಒಗ್ಗೂಡಿಸುವ ಪ್ರಯತ್ನದಲ್ಲಿರುವ ಅವರಿಗೆ ಅದರಲ್ಲಿ ಆಸಕ್ತಿಯಿದೆಯೆಂಬುದು ಸ್ಪಷ್ಟ. ಅವರು ಸತತವಾಗಿ ಪ್ರತಿಪಕ್ಷಗಳ ಸಭೆಗಳನ್ನು ನಡೆಸುತ್ತಿದ್ದಾರೆ. ಮಮತಾ ಬ್ಯಾನರ್ಜಿ ಕೂಡ ಜಂಟಿ ವಿರೋಧಪಕ್ಷ ಸಭೆ ಕರೆಯುವಂತೆ ನಿತೀಶ್ ಅವರನ್ನು ವಿನಂತಿಸಿ ದ್ದಾರೆ. ಇವೆಲ್ಲವೂ ನಿತೀಶ್ ಅವರೇ ಮುಂದಿರುವುದರ ಸೂಚಕ.

ಬಿಹಾರ ರಾಜಕೀಯದ ಬಗ್ಗೆ ಪುಸ್ತಕಗಳನ್ನು ಬರೆದಿರುವ ವರ್ಮಾ, ಕೇಂದ್ರದಲ್ಲಿ ನಿತೀಶ್ ಹೆಚ್ಚಿನ ಪಾತ್ರ ಬಯಸುತ್ತಿದ್ದಾರೆ ಎಂದೇ ವಾದಿಸುತ್ತಾರೆ. 2027ರ ಬಿಹಾರ ವಿಧಾನಸಭಾ ಚುನಾವಣೆ ತೇಜಸ್ವಿ ಯಾದವ್ ನಾಯಕತ್ವದಲ್ಲಿ ನಡೆಯಲಿದೆ ಎಂದು ಅವರು ಈಗಾಗಲೇ ಹೇಳಿದ್ದಾರೆ. ಆದ್ದರಿಂದ ನಿತೀಶ್ ಅವರು ರಾಜ್ಯ ರಾಜಕೀಯದ ಬಗ್ಗೆ ಯೋಚಿಸುತ್ತಿಲ್ಲ. ಬದಲಾಗಿ, ಲೋಕಸಭೆ ಚುನಾವಣೆಯಲ್ಲಿ ಪ್ರತಿಪಕ್ಷಗಳು ಬಹುಮತ ಪಡೆದರೆ ನಿತೀಶ್ ಮಹತ್ವದ ಸ್ಥಾನದಲ್ಲಿರುತ್ತಾರೆ, ಒಂದು ವೇಳೆ ಪ್ರತಿಪಕ್ಷಗಳು ಚುನಾವಣೆಯಲ್ಲಿ ನಿರೀಕ್ಷಿತ ಗುರಿ ಮುಟ್ಟಲಾಗದಿದ್ದರೂ ನಿತೀಶ್ ಲೋಕಸಭೆಯಲ್ಲಿ ಪ್ರಮುಖ ಶಕ್ತಿಯಾಗುತ್ತಾರೆ ಎಂಬುದು ವರ್ಮಾ ವಾದ.

ರಾಜಕೀಯ ವಿಜ್ಞಾನಿ ಸುಹಾಸ್ ಪಾಲ್ಶಿಕರ್ ಪ್ರಕಾರ, ಇತರ ಆಕಾಂಕ್ಷಿಗಳಂತೆಯೇ ನಿತೀಶ್ ಅವರ ಪ್ರಾಥಮಿಕ ಗುರಿಯೂ ಸಂಭವನೀಯ ವಿರೋಧ ಪಕ್ಷಗಳ ಮೈತ್ರಿಯ ಸಾರಥ್ಯದ ಸ್ಥಾನದಲ್ಲಿರಬೇಕು ಎಂಬುದೇ ಆಗಿದೆ. ಬಿಜೆಪಿಗೆ ಬಹುಮತ ಪಡೆಯಲು ಸಾಧ್ಯವಾಗದಿದ್ದರೆ ಸಂಭಾವ್ಯ ಪ್ರಧಾನ ಮಂತ್ರಿ ಅಭ್ಯರ್ಥಿಯಾಗಿ ಹೊರಹೊಮ್ಮುವುದಕ್ಕೆ ಆಗ ನಿತೀಶ್ ಅವರಿಗೆ ಅವಕಾಶವಿರುತ್ತದೆ ಎನ್ನುತ್ತಾರೆ ಪಾಲ್ಶಿಕರ್.

ನಿತೀಶ್ ಅವರಿಗಿರುವ ವಿಶಿಷ್ಟ ಸ್ಥಾನ ಮತ್ತು ಬಲವಾದ ಚರಿಷ್ಮಾ ಅವರನ್ನು ಪ್ರತಿಪಕ್ಷಗಳ ಒಗ್ಗೂಡಿಸುವಿಕೆಯಲ್ಲಿ ಮುಂಚೂಣಿಯಲ್ಲಿರಿಸಿದೆ ಎಂಬ ವಾದವೂ ಇದರೊಂದಿಗಿದೆ. ನಿತೀಶ್ ಮುಖ್ಯಮಂತ್ರಿಯಾಗಿ ಅಪಾರ ಅನುಭವ ಹೊಂದಿದ್ದು, ಬಿಹಾರದಂಥ ದೊಡ್ಡ ರಾಜ್ಯವನ್ನು ಮುನ್ನಡೆಸುತ್ತಿದ್ದಾರೆ ಮತ್ತು ಬೇರೆಯವರಿಗೆ ಹೋಲಿಸಿಕೊಂಡರೆ ಭ್ರಷ್ಟಾಚಾರದ ಕಳಂಕವಿಲ್ಲದ ರಾಜಕಾರಣಿಯೂ ಹೌದು. ಇದಲ್ಲದೆ ಬಿಹಾರ ಹೆಚ್ಚಿನ ಸಂಖ್ಯೆಯ ಲೋಕಸಭಾ ಸ್ಥಾನಗಳನ್ನು ಹೊಂದಿದೆ ಮತ್ತು ನಿತೀಶ್ ಹಿಂದಿ ಬಲ್ಲವರಾಗಿರುವುದೂ ಅವರಿಗೆ ಅನುಕೂಲಕರವಾಗಿ ಪರಿಣಮಿಸಲಿದೆ ಎಂಬ ಅಭಿಪ್ರಾಯ ಪಾಲ್ಶಿಕರ್ ಅವರದು.

ನಿತೀಶ್ ಬಿಹಾರದಲ್ಲಿ ಅತಿ ಹೆಚ್ಚು ಕಾಲ ಅಧಿಕಾರದಲ್ಲಿದ್ದ ಮುಖ್ಯಮಂತ್ರಿ. ರಾಜ್ಯದಲ್ಲಿ ಅವರು ಇನ್ನು ಸಾಧಿಸಬೇಕಿರುವುದು ಏನೂ ಇಲ್ಲ. ಅವರೀಗ ಕೇಂದ್ರ ರಾಜಕಾರಣದಲ್ಲಿ ತೊಡಗಿಸಿಕೊಳ್ಳಲು ಬಯಸಿದ್ದಾರೆ ಎನ್ನುತ್ತಾರೆ ಇಂಡಿಯನ್ ಎಕ್ಸ್‌ಪ್ರೆಸ್ ಹಿರಿಯ ಸಹಾಯಕ ಸಂಪಾದಕ ಸಂತೋಷ್ ಸಿಂಗ್.

ಇದಲ್ಲದೆ, ಪ್ರತಿಪಕ್ಷಗಳನ್ನು ಒಗ್ಗೂಡಿಸಲು ನಿತೀಶ್ ಬೇಕಾದಷ್ಟು ಸಮಯಾವಕಾಶ ಹೊಂದಿದ್ದಾರೆ. ಬೇರೆಯವರು ಅಂತಹ ಸ್ಥಿತಿಯಲ್ಲಿಲ್ಲ. ಮಮತಾ ಬ್ಯಾನರ್ಜಿ ಬಂಗಾಳದ ಮೇಲೆ ಗಮನ ಇಡಬೇಕಾಗಿದೆ. ಕೆ. ಚಂದ್ರಶೇಖರ್ ರಾವ್ ಅವರಿಗೆ ಅಧಿಕಾರ ಉಳಿಸಿಕೊಳ್ಳಬೇಕಾದ ತುರ್ತು ಇದೆ. ಉದ್ಧವ್ ಠಾಕ್ರೆಗೆ ಮತ್ತೆ ಅಧಿಕಾರಕ್ಕೇರಬೇಕಾಗಿದೆ. ಆದರೆ ನಿತೀಶ್ ಅವರಿಗೆ ಇಂತಹ ಒತ್ತಡಗಳಿಲ್ಲ. ಅವರು ಈಗಾಗಲೇ ಬಿಹಾರವನ್ನು ತೇಜಸ್ವಿ ಯಾದವ್ ಅವರಿಗೆ ಬಿಟ್ಟಿದ್ದಾರೆ ಎಂಬ ವಾದವನ್ನೂ ವಿಶ್ಲೇಷಕರು ಮಂಡಿಸುತ್ತಾರೆ. ಅದರ ಪ್ರಕಾರ, ನಿತೀಶ್ ಈಗ ಬಿಹಾರದ ಬಗ್ಗೆ ಚಿಂತಿಸುತ್ತಿಲ್ಲ. ಏಕೆಂದರೆ, ಅವರ ಜನತಾ ದಳ (ಸಂಯುಕ್ತ) ಮತ್ತು ರಾಷ್ಟ್ರೀಯ ಜನತಾ ದಳ ಬಿಜೆಪಿ ವಿರುದ್ಧ ಪ್ರಬಲ ಶಕ್ತಿಯಾಗಿವೆ.

ಎಲ್ಲ ಪ್ರತಿಪಕ್ಷಗಳ ನಾಯಕರೊಂದಿಗೆ ನಿತೀಶ್ ಕುಮಾರ್ ಉತ್ತಮ ಸಂಬಂಧ ಹೊಂದಿರುವುದು ಕೂಡ ಅವರಿಗೆ ಲಾಭದಾಯಕವಾಗಿದೆ. ಅವರು ಇತರ ಎಲ್ಲ ವಿರೋಧ ಪಕ್ಷಗಳ ನಾಯಕರೊಡನೆ ಸಂಪರ್ಕ ಸಾಧಿಸಬಲ್ಲರು. ಆದರೆ ಮಮತಾ ಬ್ಯಾನರ್ಜಿ, ಅರವಿಂದ ಕೇಜ್ರಿವಾಲ್, ಕೆಸಿಆರ್ ಮತ್ತು ಸ್ಟಾಲಿನ್ ಇವರು ಎಲ್ಲರೊಂದಿಗೂ ಮಾತನಾಡಲು ಸಾಧ್ಯವಿಲ್ಲ ಎನ್ನುತ್ತಾರೆ ಸಂತೋಷ್ ಸಿಂಗ್.

ಇವೆಲ್ಲದರೊಂದಿಗೇ, ಪ್ರತಿಪಕ್ಷಗಳ ಮೈತ್ರಿಕೂಟದಲ್ಲಿ ಕಾಂಗ್ರೆಸ್ ಕೇಂದ್ರ ಸ್ಥಾನದಲ್ಲಿರುತ್ತದೆಂಬುದನ್ನು ನಿತೀಶ್ ಒಪ್ಪಿರುವ ಕಾರಣದಿಂದ ಇತರ ವಿರೋಧ ಪಕ್ಷಗಳ ನಾಯಕರೊಡನೆ ಮೈತ್ರಿ ವಿಚಾರದಲ್ಲಿ ಮಾತುಕತೆ ಮುಂದುವರಿಸಲು ನಿತೀಶ್ ಅವರಿಗೆ ಕಾಂಗ್ರೆಸ್ ಅವಕಾಶ ಕೊಟ್ಟಿದೆ. ಕಾಂಗ್ರೆಸ್ ಬೆಂಬಲವನ್ನೂ ಹೊಂದಿರುವುದು ನಿತೀಶ್ ಅವರ ದೊಡ್ಡ ಶಕ್ತಿಯಾಗಿದೆ.

ಆದರೆ ಇವೆಲ್ಲವೂ ನಿತೀಶ್ ಅವರಿಗೆ ನೆರವಾಗುತ್ತದೆ ಎನ್ನಲಾಗದು ಎಂಬ ವಾದವೂ ಇದೆ. ಸ್ವರಾಜ್ ಇಂಡಿಯಾ ಪಕ್ಷದ ಅಧ್ಯಕ್ಷ ಯೋಗೇಂದ್ರ ಯಾದವ್ ಹೇಳುವುದೆಂದರೆ, ದೊಡ್ಡ ಪ್ರತಿಪಕ್ಷ ಒಕ್ಕೂಟದ ಬಗ್ಗೆ ಗಮನ ಹರಿಸುವ ಬದಲು ಪ್ರತಿಪಕ್ಷಗಳು ರಾಜ್ಯಮಟ್ಟದ ಮೈತ್ರಿಯ ಮೇಲೆ ಕೇಂದ್ರೀಕರಿಸಬೇಕು ಎಂದು. ಕರ್ನಾಟಕ ಚುನಾವಣೆ ಫಲಿತಾಂಶದ ನಂತರ ಪ್ರತಿಪಕ್ಷಗಳಲ್ಲಿ ಸ್ವಲ್ಪಭರವಸೆ ಮೂಡಿದೆ. ಹಾಗಾಗಿ ವಿರೋಧ ಪಕ್ಷಗಳ ಒಗ್ಗೂಡುವಿಕೆಯ ಮಾತುಕತೆಗಳು ತೀವ್ರತೆ ಪಡೆಯಲಿವೆ. ಆದರೆ ಇದು ನೆರವಾಗಲಿದೆ ಎನ್ನಲಿಕ್ಕಾಗದು ಎಂಬುದು ಯಾದವ್ ಅನಿಸಿಕೆ.

ಪ್ರತಿಪಕ್ಷಗಳ ಒಗ್ಗೂಡುವಿಕೆ ಅಗತ್ಯವಿರುವ, ಆದರೆ ಇನ್ನೂ ಸಾಧಿಸದ ರಾಜ್ಯಗಳಿವೆ. ನಿತೀಶ್ ಕುಮಾರ್ ಅವರು ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷವನ್ನು ಒಗ್ಗೂಡಿಸಬಲ್ಲರೆ? ಅಥವಾ ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್‌ಗಳು ಒಂದಾಗುವುದು ಸಾಧ್ಯವಿದೆಯೆ? ಈ ಪ್ರಶ್ನೆಗಳನ್ನು ಯಾದವ್ ಎತ್ತುತ್ತಾರೆ.

ಪ್ರತಿಪಕ್ಷಗಳ ಒಗ್ಗೂಡುವಿಕೆ ಮಹಾಚುನಾವಣೆಗೆ ತುಸು ಮುಂಚೆ ಮತ್ತು ಆನಂತರದ ಕೆಲದಿನಗಳ ಮಾತಷ್ಟೇ ಆಗಿಬಿಡುವ ಸಾಧ್ಯತೆಯ ಬಗ್ಗೆ ಈ ವಾದಗಳು ಬೆರಳು ಮಾಡುತ್ತವೆ. ಅಷ್ಟಕ್ಕೂ ಸಾರ್ವತ್ರಿಕ ಚುನಾವಣೆಯಲ್ಲಿ ಕದನ ನಡೆಯುವುದು ಸ್ಥಳೀಯವಾಗಿಯೇ. ಹಾಗಾಗಿ ಸೀಟು ಹಂಚಿಕೆಯೇ ಈ ಆಟದಲ್ಲಿ ದೊಡ್ಡ ಮಟ್ಟದ ತಂತ್ರವಾಗಿದೆ ಎಂದೂ ವಿಶ್ಲೇಷಕರು ಹೇಳುತ್ತಾರೆ.

(ಕೃಪೆ: scroll.in)

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)