ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನ | ಹುಲ್ಲಿನಲ್ಲಿ ಅಡಗಿದ್ದ ಜಿಂಕೆ ಮರಿಯ ವಾಸನೆ ಹಿಡಿದು ಬೇಟೆಯಾಡಿದ ಹುಲಿಯ ವೀಡಿಯೊ ವೈರಲ್
PC : X \ @skumarias02
ಡೆಹ್ರಾಡೂನ್: ಹುಲಿ ತನ್ನ ಚಾಣಾಕ್ಷ ಬೇಟೆಗೆ ವನ್ಯಜೀವಿಗಳ ಲೋಕದಲ್ಲಿ ಹೆಸರಾಗಿದ್ದು, ಈಗ ಮತ್ತೊಮ್ಮೆ ಹುಲ್ಲಿನಲ್ಲಿ ಅಡಗಿ ಕುಳಿತಿದ್ದ ಜಿಂಕೆಮರಿಯನ್ನು ತನ್ನ ವಾಸನಾ ಸಾಮರ್ಥ್ಯದಿಂದ ಪತ್ತೆ ಹಚ್ಚಿ ಬೇಟೆಯಾಡುವ ಮೂಲಕ ಸುದ್ದಿಯಾಗಿದೆ. ಸದ್ಯ ಈ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಈ ವೀಡಿಯೊವನ್ನು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಐಎಎಸ್ ಅಧಿಕಾರಿ ಸಂಜಯ್ ಕುಮಾರ್ ಹಂಚಿಕೊಂಡಿದ್ದು, ವನ್ಯಜೀವಿ ಲೋಕದಲ್ಲಿ ಆಹಾರ ಸರಪಳಿಯು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಈ ವೀಡಿಯೊ ಮತ್ತೊಮ್ಮೆ ಪ್ರದರ್ಶಿಸಿದೆ.
ಹುಲಿಯೊಂದು ಹೇಗೆ ತನ್ನ ವಾಸನಾ ಸಾಮರ್ಥ್ಯವನ್ನು ಬಳಸಿಕೊಂಡು ಹುಲ್ಲಿನಲ್ಲಿ ಅಡಗಿ ಕುಳಿತಿದ್ದ ಜಿಂಕೆ ಮರಿಯನ್ನು ಬೇಟೆಯಾಡಿತು ಎಂಬುದು ಈ ವೀಡಿಯೊದಲ್ಲಿ ಸೆರೆಯಾಗಿದೆ. ಈ ವೀಡಿಯೊವು ಉತ್ತರಾಖಂಡದ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದ್ದಾಗಿದೆ.
“ವನ್ಯಲೋಕದಲ್ಲಿ ಕಣ್ಣಾಮುಚ್ಚಾಲೆ ದೈನಂದಿನ ಸಂಗತಿಯಾಗಿದೆ. ಆಹಾರ ಸರಪಳಿಯ ಮೇಲ್ತುದಿಯಲ್ಲಿರುವ ಬೇಟೆಗಾರ ಪ್ರಾಣಿಯು ಪರಿಸರ ವ್ಯವಸ್ಥೆಯ ಸಮತೋಲನವನ್ನು ಕಾಪಾಡುತ್ತದೆ. ಇಲ್ಲಿನ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದಲ್ಲಿನ ಹುಲ್ಲಿನ ನಡುವೆ ಅಡಗಿ ಕುಳತಿದ್ದ ಕೆಲವೇ ದಿನಗಳ ಹಿಂದೆ ಜನಿಸಿದ್ದ ಜಿಂಕೆಮರಿಯ ವಾಸನೆಯನ್ನು ಹುಲಿ ಪತ್ತೆ ಹಚ್ಚಿದೆ” ಎಂದು ಕುಮಾರ್ ಬರೆದುಕೊಂಡಿದ್ದಾರೆ.
ಎಪ್ರಿಲ್ 20ರಂದು ಪೋಸ್ಟ್ ಮಾಡಲಾಗಿರುವ ಈ ವೀಡಿಯೊಗೆ ಇಲ್ಲಿಯವರೆಗೆ 3,700 ವೀಕ್ಷಣೆಗಳು ದೊರೆತಿದ್ದು, ಸಾಮಾಜಿಕ ಮಾಧ್ಯಮ ಬಳಕೆದಾರರಿಂದ ಹಲವಾರು ಪ್ರತಿಕ್ರಿಯೆಗಳನ್ನೂ ಗಿಟ್ಟಿಸಿದೆ. “ಹುಲಿಯ ದೃಷ್ಟಿ ಸಾಮರ್ಥ್ಯಕ್ಕೆ ಹೋಲಿಸಿದರೆ, ವಾಸನಾ ಶಕ್ತಿ ತೀರಾ ದುರ್ಬಲ. ವೀಡಿಯೊವನ್ನು ಪರೀಕ್ಷಿಸಿ. ಗೊತ್ತುಗುರಿಯಲ್ಲದೆ ನಡೆದಾಡುತ್ತಿರುವ ಅದು ಜಿಂಕೆಮರಿಯ ಮೇಲೆ ಎಡವಿ ಬಿದ್ದಿರುವುದನ್ನು ನೋಡಬಹುದು” ಎಂದು ಓರ್ವ ಬಳಕೆದಾರರು ವಾದಿಸಿದ್ದಾರೆ. “ಜಿಂಕೆ ಮರಿ ಪಾಲಿಗೆ ತೀರಾ ದುರದೃಷ್ಟಕರ. ದೊಡ್ಡ ಪ್ರಾಣಿಗೆ ಅದು ಕೇವಲ ಉಪಾಹಾರವಾದಂತಿದೆ” ಎಂದು ಮತ್ತೊಬ್ಬ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.
“ಮಹತ್ವದ ತುಣುಕು. ಈ ಉಜ್ವಲ ವರ್ಣದ ಹುಲಿಗೆ ಇದು ತೀರಾ ಸುಲಭದಂತಿದೆ. ಹುಲಿಗಳು ಸಣ್ಣವಿರಲಿ ಅಥವಾ ದೊಡ್ಡವಿರಲಿ, ಅವು ನೆಲದ ಮೇಲಿನ ಅತ್ಯಂತ ಯಶಸ್ವಿ ಬೇಟೆಗಾರ ಪ್ರಾಣಿಗಳಾಗಿವೆ” ಎಂದು ಮೂರನೆಯ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.
ಇದಕ್ಕೂ ಮುನ್ನ ರಣತಂಬೋರ್ ರಾಷ್ಟ್ರೀಯ ಉದ್ಯಾನವನ ಹಾಗೂ ರಾಜಸ್ಥಾನದ ಹುಲಿ ಸಂರಕ್ಷಿತಾರಣ್ಯ ಪ್ರದೇಶದ ಪ್ರಖ್ಯಾತ ಹೆಣ್ಣು ಹುಲಿ ರಿದ್ಧಿ, ಮೊಸಳೆಯ ಮೇಲೆ ತನ್ನ ಮರಿ ಹುಲಿಗಳಿಗೆ ಆಹಾರ ಉಣಿಸುತ್ತಿರುವ ವೀಡಿಯೊ ಅಂತರ್ಜಾಲದಲ್ಲಿ ವೈರಲ್ ಆಗಿತ್ತು. ಈ ವೀಡಿಯೊದಲ್ಲಿ ನದಿಯಲ್ಲಿನ ತಮ್ಮ ಬೇಟೆಯ ಮೇಲೆ ರಿದ್ಧಿ ಹಾಗೂ ಅದರ ಮರಿ ಹುಲಿಗಳು ಶಾಂತಚಿತ್ತವಾಗಿ ಆಹಾರ ಸೇವಿಸುತ್ತಿರುವುದನ್ನು ನೋಡಬಹುದಾಗಿದೆ.