varthabharthi

92ನೇ ಆಸ್ಕರ್ ಪ್ರಶಸ್ತಿ ಪ್ರದಾನ

ಲಾಸ್ ಏಂಜಲಿಸ್ (ಅಮೆರಿಕ): ದಕ್ಷಿಣ ಕೊರಿಯದ ಬಾಂಗ್ ಜೂನ್-ಹೊ ನಿರ್ದೇಶನದ ಚಿತ್ರ ‘ಪ್ಯಾರಸೈಟ್’, ಶ್ರೇಷ್ಠ ಚಿತ್ರ ಮತ್ತು ಶ್ರೇಷ್ಠ ನಿರ್ದೇಶನ ಸೇರಿದಂತೆ ನಾಲ್ಕು ಆಸ್ಕರ್ ಪ್ರಶಸ್ತಿಗಳನ್ನು ಗೆದ್ದಿದೆ. ಈ ಮೂಲಕ ಬಾಂಗ್ ಜೂನ್-ಹೊ ಇತಿಹಾಸವೊಂದನ್ನು ನಿರ್ಮಿಸಿದ್ದಾರೆ. ಈ ಚಿತ್ರವು ಶ್ರೇಷ್ಠ ಅಂತರ್‌ರಾಷ್ಟ್ರೀಯ ಚಲನಚಿತ್ರ ಮತ್ತು ಶ್ರೇಷ್ಠ ಮೂಲ ಚಿತ್ರಕತೆ ಪ್ರಶಸ್ತಿಗಳನ್ನೂ ಗೆದ್ದಿದೆ. ಶ್ರೇಷ್ಠ ಚಿತ್ರ ಪ್ರಶಸ್ತಿಗಾಗಿ ಫೋರ್ಡ್ ವರ್ಸಸ್ ಫೆರಾರಿ, ದ ಐರಿಶ್‌ಮ್ಯಾನ್, ಜೋಜೊ ರ್ಯಾಬಿಟ್, ಜೋಕರ್, ಲಿಟಲ್ ವಿಮೆನ್, ಮ್ಯಾರೇಜ್ ಸ್ಟೋರಿ, 1917 ಮತ್ತು ವನ್ಸ್ ಅಪೋನ್ ಅ ಟೈಮ್ ಇನ್ ಹಾಲಿವುಡ್ ಚಿತ್ರಗಳನ್ನು ನಾಮನಿರ್ದೇಶನ ಮಾಡಲಾಗಿತ್ತು. ಸರ್ ಸ್ಯಾಮ್ ಮೆಂಡಿಸ್‌ರ ‘1917’ ಮೂರು ಪ್ರಶಸ್ತಿಗಳನ್ನು ಬಗಲಿಗೆ ಹಾಕಿಕೊಂಡಿದೆ. ಅವುಗಳೆಂದರೆ ಶ್ರೇಷ್ಠ ಛಾಯಾಗ್ರಹಣ ಪ್ರಶಸ್ತಿ, ಶ್ರೇಷ್ಠ ಸೌಂಡ್ ಮಿಕ್ಸಿಂಗ್ ಪ್ರಶಸ್ತಿ ಮತ್ತು ಶ್ರೇಷ್ಠ ದೃಶ್ಯ ಪರಿಣಾಮಗಳು ಪ್ರಶಸ್ತಿ.‘ಜೋಕರ್’ ಚಿತ್ರಕ್ಕಾಗಿ ಜೋಕಿನ್ ಫೀನಿಕ್ಸ್ ಶ್ರೇಷ್ಠ ನಟ ಪ್ರಶಸ್ತಿಯನ್ನು ಪಡೆದರು. ರೆನೀ ಝೆಲ್ವೆಗರ್ ‘ಜೂಡಿ’ ಚಿತ್ರಕ್ಕಾಗಿ ಶ್ರೇಷ್ಠ ನಟಿ ಪ್ರಶಸ್ತಿಯನ್ನು ಗಳಿಸಿದರು. ಅದೇ ವೇಳೆ, ‘ವನ್ಸ್ ಅಪೋನ್ ಅ ಟೈಮ್ ಇನ್ ಹಾಲಿವುಡ್’ ಚಿತ್ರದಲ್ಲಿನ ನಟನೆಗಾಗಿ ಬ್ರಾಡ್ ಪಿಟ್ ಶ್ರೇಷ್ಠ ಪೋಷಕ ನಟ ಪ್ರಶಸ್ತಿಯನ್ನು ಗಳಿಸಿದರು ಹಾಗೂ ‘ಮ್ಯಾರೇಜ್ ಸ್ಟೋರಿ’ ಚಿತ್ರದಲ್ಲಿನ ನಟನೆಗಾಗಿ ಲಾರಾ ಡರ್ನ್ ಶ್ರೇಷ್ಠ ಪೋಷಕ ನಟಿ ಪ್ರಶಸ್ತಿ ಪಡೆದರು. ಶ್ರೇಷ್ಠ ಚಿತ್ರ ಪ್ರಶಸ್ತಿಗೆ ಪ್ರಮುಖ ಸ್ಪರ್ಧಿಯಾಗಿದ್ದ, ಮೊದಲ ಮಹಾಯುದ್ಧದ ಕತೆಯನ್ನು ಒಳಗೊಂಡ ‘1917’ಕ್ಕೆ ಶ್ರೇಷ್ಠ ಛಾಯಾಗ್ರಹಣ ಪ್ರಶಸ್ತಿ ಲಭಿಸಿದೆ. ಚಿತ್ರವನ್ನು ಒಂದೇ ಶಾಟ್‌ನಲ್ಲಿ ಕಾಣುವಂತೆ ಚಿತ್ರೀಕರಿಸಲಾಗಿದೆ. ಶ್ರೇಷ್ಠ ದೃಶ್ಯ ಪರಿಣಾಮ ಪ್ರಶಸ್ತಿಯನ್ನೂ ಅದು ಗಳಿಸಿದೆ.

Comments (Click here to Expand)