varthabharthi

ಜಾಮಿಯಾ ವಿವಿ: ಪೊಲೀಸರಿಂದ ಲಾಠಿ ಚಾರ್ಜ್

ಪೌರತ್ವ ತಿದ್ದುಪಡಿ ಕಾಯ್ದೆ, ರಾಷ್ಟ್ರೀಯ ಪೌರತ್ವ ನೋಂದಣಿ ಹಾಗೂ ರಾಷ್ಟ್ರೀಯ ಜನಸಂಖ್ಯೆ ನೋಂದಣಿ ವಿರೋಧಿಸಿ ಸೋಮವಾರ ದಿಲ್ಲಿಯ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾನಿಲಯದಿಂದ ಸಂಸತ್ ಭವನಕ್ಕೆ ಪ್ರತಿಭಟನಾ ರ್‍ಯಾಲಿ  ನಡೆಸಿದ ವಿದ್ಯಾರ್ಥಿಗಳು ಹಾಗೂ ನಾಗರಿಕರ ಮೇಲೆ ದಿಲ್ಲಿ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ. ಇದರಿಂದ ಹಲವರು ಗಾಯಗೊಂಡಿದ್ದಾರೆ. ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾನಿಲಯ ದಿಂದ ಸಂಸತ್ ಭವನದವರೆಗೆ ಶಾಂತಿಯುತ ಪ್ರತಿಭಟನೆಗೆ ಜಾಮಿಯಾ ಸಮನ್ವಯ ಸಮಿತಿ ಕರೆ ನೀಡಿತ್ತು. ಆದರೆ, ಈ ರ್ಯಾಲಿಯನ್ನು ದಿಲ್ಲಿ ಪೊಲೀಸರು ಬಲವಂತವಾಗಿ ತಡೆದರು. ಪ್ರತಿಭಟನಾ ರ್ಯಾಲಿಯಲ್ಲಿ ಪಾಲ್ಗೊಂಡ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವ ವಿದ್ಯಾನಿಲಯದ ವಿದ್ಯಾರ್ಥಿನಿಯರ ಮರ್ಮಾಂಗಗಳಿಗೆ ಘಾಸಿಯಾದ ಹಿನ್ನೆಲೆಯಲ್ಲಿ ಅವರು ಇಲ್ಲಿನ ಜಾಮಿಯಾ ಆರೋಗ್ಯ ಕೇಂದ್ರ ಹಾಗೂ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಕೆಲವು ವಿದ್ಯಾರ್ಥಿನಿಯರಿಗೆ ತೀವ್ರವಾಗಿ ಘಾಸಿಯಾಗಿದೆ. ಅವರನ್ನು ಅಲ್-ಶಿಫಾ ಆಸ್ಪತ್ರೆಗೆ ವರ್ಗಾಯಿಸಲಾಗಿದೆ ಎಂದು ಆರೋಗ್ಯ ಕೇಂದ್ರದ ನಿವಾಸಿ ವೈದ್ಯರು ತಿಳಿಸಿದ್ದಾರೆ. ‘‘ಸುಮಾರು 10ಕ್ಕೂ ಹೆಚ್ಚಿನ ವಿದ್ಯಾರ್ಥಿಗಳ ಮರ್ಮಾಂಗಗಳಿಗೆ ಪೊಲೀಸರು ಥಳಿಸಿದ್ದಾರೆ ಹಾಗೂ ಬೂಟು ಕಾಲಿನಿಂದ ಒದ್ದಿದ್ದಾರೆ. ಹಲವರಿಗೆ ಗಾಯಗಳಾಗಿವೆ. ಕೆಲವರಿಗೆ ಗಂಭೀರ ಗಾಯ ಗಳಾಗಿರುವುದರಿಂದ ಅಲ್-ಶಿಫಾ ಆಸ್ಪತ್ರೆಗೆ ವರ್ಗಾಯಿಸಲಾಗಿದೆ’’ ಎಂದವರು ತಿಳಿಸಿದ್ದಾರೆ.

Comments (Click here to Expand)