ಎರಡು ಬಾರಿಯ ವಿಶ್ವ ಚಾಂಪಿಯನ್ ಕೆಂಟೊ ಮೊಮೊಟಾ ಬ್ಯಾಡ್ಮಿಂಟನ್ನಿಂದ ನಿವೃತ್ತಿ
PC : X/@takayainfo
ಟೋಕಿಯೊ: ಎರಡು ಬಾರಿಯ ವಿಶ್ವ ಚಾಂಪಿಯನ್ ಕೆಂಟೊ ಮೊಮೊಟಾ ತನ್ನ 29ನೇ ವಯಸ್ಸಿನಲ್ಲಿ ಅಂತರ್ರಾಷ್ಟ್ರೀಯ ಬ್ಯಾಡ್ಮಿಂಟನ್ನಿಂದ ನಿವೃತ್ತಿ ಪ್ರಕಟಿಸಿದ್ದಾರೆ.
2020ರಲ್ಲಿ ನಡೆದ ಭೀಕರ ಕಾರು ಅಪಘಾತ ಮೊಮೊಟಾ ಅವರ ವೃತ್ತಿಜೀವನದ ಮೇಲೆ ಭಾರೀ ಪ್ರಭಾವ ಬೀರಿತು. 2019ರಲ್ಲಿ 11 ಪ್ರಶಸ್ತಿಗಳನ್ನು ಜಯಿಸಿ ಮಿಂಚಿದ್ದ ಜಪಾನ್ನ ಸ್ಟಾರ್ ಆಟಗಾರ ಕಾರು ಅಪಘಾತದ ನಂತರ ಕಣ್ಣಿನ ಸಮಸ್ಯೆಗೆ ಒಳಗಾಗಿದ್ದು ತನ್ನ ಮೊದಲಿನ ಫಾರ್ಮ್ಗೆ ಮರಳಲು ಪರದಾಟ ನಡೆಸುವಂತಾಗಿತ್ತು.
ಒಂದೊಮ್ಮೆ ವಿಶ್ವ ಬ್ಯಾಡ್ಮಿಂಟನ್ ರ್ಯಾಂಕಿಂಗ್ನಲ್ಲಿ ನಂ.1 ಸ್ಥಾನಕ್ಕೇರಿದ್ದ ಮೊಮೊಟಾ ಚೀನಾದಲ್ಲಿ ನಡೆದ ಥಾಮಸ್ ಕಪ್ನಲ್ಲಿ ಕೊನೆಯ ಬಾರಿ ಜಪಾನ್ ತಂಡವನ್ನು ಪ್ರತಿನಿಧಿಸಿದ ನಂತರ ಅಂತರ್ರಾಷ್ಟ್ರೀಯ ಬ್ಯಾಡ್ಮಿಂಟನ್ನಿಂದ ದೂರ ಸರಿಯಲು ನಿರ್ಧರಿಸಿದರು.
ಥಾಮಸ್ ಕಪ್ ನಂತರ ಮೊಮೊಟಾ ಅವರು ದೇಶೀಯ ಸ್ಪರ್ಧಾವಳಿಗಳಲ್ಲಿ ಜಪಾನ್ ಪರ ಆಡುವುದನ್ನು ಮುಂದುವರಿಸಿದ್ದರು. ಆದರೆ ವರ್ಲ್ಡ್ ಟೂರ್ ಟೂರ್ನಿಗಳಲ್ಲಿ ಭಾಗವಹಿಸಿರಲಿಲ್ಲ.
ವಿಶ್ವದಲ್ಲಿ ತನ್ನ ಅತ್ಯುತ್ತಮ ಸ್ಥಾನಮಾನ ಮರಳಿ ಪಡೆಯುವ ಪ್ರಯತ್ನದಲ್ಲಿ ದೈಹಿಕ ಹಾಗೂ ಮಾನಸಿಕ ಒತ್ತಡವನ್ನು ಒಪ್ಪಿಕೊಂಡಿರುವ ಮೊಮೊಟಾ ನಿವೃತ್ತಿ ನಿರ್ಧಾರಕ್ಕೆ ಬಂದಿದ್ದಾರೆ.
ಮೊಮೊಟಾ ತನ್ನ ವೃತ್ತಿಜೀವನದಲ್ಲಿ ಅಮೋಘ ಪ್ರದರ್ಶನ ನೀಡಿದ್ದಾರೆ. 2019ರಲ್ಲಿ ಪ್ರಾಬಲ್ಯ ಮೆರೆದಿದ್ದ ಅವರು 73 ಪಂದ್ಯಗಳಲ್ಲಿ ಕೇವಲ ಆರು ಪಂದ್ಯಗಳಲ್ಲಿ ಸೋತಿದ್ದರು. ಕಾರು ಅಪಘಾತ, ಆ ನಂತರದ ಗಾಯದ ಸಮಸ್ಯೆಗಳು, ರ್ಯಾಂಕಿಂಗ್ನಲ್ಲಿ ಕುಸಿತವು ಮೊಮೊಟಾ ಬೇಗನೆ ನಿವೃತ್ತಿ ಪ್ರಕಟಿಸಲು ಕಾರಣವಾಗಿದೆ.
ಮೊಮೊಟಾ ಅವರು ಜೂಜಿನ ಹಗರಣದಲ್ಲಿ ಭಾಗಿಯಾದ ಆರೋಪದಲ್ಲಿ 2016ರ ರಿಯೋ ಒಲಿಂಪಿಕ್ಸ್ನಿಂದ ನಿಷೇಧ ಎದುರಿಸಿದ್ದರು. ಈ ಎಲ್ಲ ಹಿನ್ನಡೆಗಳ ಹೊರತಾಗಿಯೂ ಕಳೆದ ವರ್ಷ ನವೆಂಬರ್ನಲ್ಲಿ ಕೊರಿಯಾ ಮಾಸ್ಟರ್ಸ್ನಲ್ಲಿ ಚಾಂಪಿಯನ್ ಆಗಿ ಎರಡು ವರ್ಷಗಳ ಪ್ರಶಸ್ತಿ ಬರವನ್ನು ನೀಗಿಸಿಕೊಂಡಿದ್ದರು. ಈ ವರ್ಷ ನಡೆಯಲಿರುವ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಭಾಗವಹಿಸಲು ಮೊಮೊಟಾ ಉತ್ಸುಕರಾಗಿದ್ದರು. ಆದರೆ, ಸದ್ಯ 52ನೇ ರ್ಯಾಂಕಿನಲ್ಲಿರುವ ಅವರು ಜಪಾನ್ ರಾಷ್ಟ್ರೀಯ ತಂಡಕ್ಕೆ ಅರ್ಹತೆ ಪಡೆದಿರಲಿಲ್ಲ.
ಕೆಂಟೊ ಮೊಮೊಟಾ ನಿವೃತ್ತಿಯ ನಂತರ ಒಂದು ಯುಗ ಅಂತ್ಯವಾಗಿದೆ. ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಮೊಮೊಟಾ ಅವರ ನಿರ್ಗಮನವು ಕ್ರೀಡೆಯಲ್ಲಿ ಮಹತ್ವದ ಬದಲಾವಣೆಗೆ ಕಾರಣವಾಗಿದ್ದು, ಕೆಂಟೊ ಅವರ ಮಾಜಿ ಎದುರಾಳಿ ವಿಕ್ಟರ್ ಅಕ್ಸೆಲ್ಸನ್ ಈಗ ಅಗ್ರಮಾನ್ಯ ಆಟಗಾರನಾಗಿದ್ದಾರೆ.